ಸರ್ವರ್ ದೋಷ, ಪಡಿತರದಾರರ ಅಕ್ಕಿಗೆ ಕನ್ನ !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE ; ಹರತಾಳು ವಿ.ಎಸ್.ಎಸ್.ಎನ್ ನಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಜುಲೈ ತಿಂಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಫಲಾನುಭವಿಗಳ ಅಕ್ಕಿಗೆ ಆಹಾರ ಸರಬರಾಜು ಇಲಾಖೆ ಕನ್ನ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹರತಾಳು ವಿ.ಎಸ್.ಎಸ್.ಎನ್ ನಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಜುಲೈ ತಿಂಗಳಲ್ಲಿ ಪಡಿತರ ವಿತರಣೆಯ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ವಾರ, 15 ದಿನಗಳ ಕಾಲ ಉಂಟಾಗಿದ್ದು ಅದನ್ನು ಗಮನಿಸದೇ ನಿರ್ಲಕ್ಷ್ಯ ವಹಿಸಿದ ತಾಲ್ಲೂಕು ಆಹಾರ ಇಲಾಖೆಯ ಅಧಿಕಾರಿಗಳು ಏಕಾಏಕಿ ಪಡಿತರದಾರರಿಗೆ ಅಕ್ಕಿ ವಿತರಣೆ ಮಾಡದೇ ತಮಗಾದ ನಷ್ಟವನ್ನು ಹೊಂದಿಸಿಕೊಳ್ಳುವ ಉದ್ದೇಶದಿಂದ ಪಡಿತರದಾರರಿಂದ ಬೆರಳಚ್ಚು ಪಡೆದು ಪಡಿತರ ನೀಡದೆ ಬರೀಗೈಯಲ್ಲಿ ಕಳುಹಿಸಿದ ಘಟನೆ ಪಡಿತರದಾರರ ಆಕ್ರೋಶಕ್ಕೆ ಕಾರಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಹರತಾಳು ಹಾಲಪ್ಪ ತಹಶೀಲ್ದಾರರ ಗಮನ ಸೆಳೆದಿದ್ದು ತಕ್ಷಣ ಜಾಗೃತರಾದ ತಹಶೀಲ್ದಾರ್ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿ ಸುಮಾರು 25-30 ಕ್ವಿಂಟಾಲ್ ಪಡಿತರ ಅಕ್ಕಿಯಲ್ಲಿ ಸಾಕಷ್ಟು ಲೋಪ ಎಸಗಿದ್ದು ಅದನ್ನು ಸರಿದೂಗಿಸಿಕೊಳ್ಳುವ ನೆಪದಲ್ಲಿ ಪಡಿತರದಾರರಿಂದ ಸಹಿ ಹಾಕಿಸಿಕೊಂಡು ಅಕ್ಕಿ ವಿತರಣೆ ಮಾಡದೆ ಹಾಗೆ ಕಳುಹಿಸಿರುವುದಾಗಿ ಹೇಳಲಾಗಿದೆ.

ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿ ಭೇಟಿ ನೀಡಿ ವಿಚಾರಿಸಿದಾಗ ಸರ್ವರ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 366 ಕಾರ್ಡ್‌ದಾರರಿದ್ದು ಜುಲೈ ಅಂತ್ಯದಲ್ಲಿ ಈ ರೀತಿ ಸಮಸ್ಯೆಯಾಗಿದ್ದು ಪಡಿತರ ಸ್ಟಾಕ್‌ನಲ್ಲಿ ಕಡಿಮೆ ಪಡಿತರವನ್ನು ಆಹಾರ ಇಲಾಖೆಯಿಂದ ಆಗಸ್ಟ್ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಗೆ ಕಳುಹಿಸಿದ್ದು ಇದರಿಂದಾಗಿ ಹಲವು ಪಡಿತರದಾರರು ಜುಲೈ ತಿಂಗಳ ಅಕ್ಕಿ ವಿತರಣೆಗೆ ಪಟ್ಟು ಹಿಡಿದರು ಆಗ ಸರ್ವರ್‌ನಲ್ಲಾದ ಲೋಪದಿಂದಾಗಿ ನಾವು ಪಡಿತರದಾರರಿಗೆ ಹೊರಗಿನಿಂದ ಖರೀದಿಸಿ ಅಕ್ಕಿಯನ್ನು ವಿತರಿಸಲಾಗುತ್ತಿರುವುದಾಗಿ ವಿವರಿಸಿದರು.

ಏನೇ ಆಗಲಿ ಎತ್ತಿಗೆ ಜ್ವರ ಎಂದರೇ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿಗೆ ತಾಲ್ಲೂಕಿನ ಆಹಾರ ಇಲಾಖೆ ಅಧಿಕಾರಿಗಳಿಂದಾದ ತಪ್ಪಿಗೆ ಸೊಸೈಟಿಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದು ಇದರಿಂದಾಗಿ ಸೊಸೈಟಿಯವರು ತಲೆ ತಗ್ಗಿಸುವಂತಾಗಿದೆ.

ಒಟ್ಟಾರೆಯಾಗಿ ಸರ್ವರ್ ಲೋಪದಿಂದಾಗಿ ಬಡವರ ಪಡಿತರ ಅಕ್ಕಿಗೆ ಕತ್ತರಿ ಹಾಕಿದಂತಾಗಿ ರಿಪ್ಪನ್‌ಪೇಟೆ ಮಾತಾ ವಿವಿಧೋದ್ದೇಶ ಮಹಿಳಾ ಸಂಘದವರು ಹರತಾಳು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದರು.

Leave a Comment

error: Content is protected !!