ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ ; ಪ್ರೇಮಾ

Written by Malnadtimes.in

Published on:

WhatsApp Group Join Now
Telegram Group Join Now

SORABA | ಹೆಣ್ಣುಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಏಕಾಗ್ರತೆಯು ಸಹ ಹೆಚ್ಚಾಗುತ್ತದೆ ಎಂದು ಪುರಸಭೆ ಸದಸ್ಯೆ ಪ್ರೇಮಾ ಟೋಕಪ್ಪ ಹೇಳಿದರು.

ಶುಕ್ರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಹಮ್ಮಿಕೊಂಡ ಕರಾಟೆ ತರಬೇತಿ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ಸಂಕೋಚಪಡದೆ ಕರಾಟೆಯನ್ನು ಶ್ರದ್ದೆಯಿಂದ ಕಲಿಯಬೇಕು. ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆದರೆ ಧೈರ್ಯ ಹೆಚ್ಚುತ್ತದೆ. ಯಾರಾದರೂ ಆಕ್ರಮಣ ಮಾಡಿದರೆ ಅದರಿಂದ ಪರಾಗಲು ಅನುಕೂಲವಾಗುತ್ತದೆ ಎಂದ ಅವರು, ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿರುವುದು ಹೆಮ್ಮೆಯ ವಿಷಯ. ಈಗಾಗಲೇ ಸಚಿವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸರ್ಕಾರವೂ ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯವನ್ನು ಕಲ್ಪಿಸುತ್ತಿದೆ ಇದರ ಸದುಪಯೋಗ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.

ಸಾಗರ ಕರಾಟೆ ಇನ್ಸ್ಟಿಟ್ಯೂಟ್‍ನ ಕರಾಟೆ ತರಬೇತುದಾರ ಶಿಹಾನ್ ಪಂಚಪ್ಪ ಮಾತನಾಡಿ, ಕರಾಟೆ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಜೊತೆಗೆ ಆತ್ಮರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಓದಿನಲ್ಲಿ ಆಸಕ್ತಿ ಮೂಡಲು ಸಹ ಅನುಕೂಲವಾಗುತ್ತದೆ. ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು. ಕರಾಟೆಯಲ್ಲಿ ಸಾಧನೆ ಮಾಡಿದರೆ ಉನ್ನತ ಶಿಕ್ಷಣ ಪಡೆಯಲು ಮೀಸಲಾತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಕರಾಟೆ ಕಲಿಯಬೇಕು ಎಂದರು.

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಶಿಕ್ಷಣ ಇಲಾಖೆಯಿಂದ ಶೋ ವಿತರಿಸಲಾಯಿತು. ನಂತರ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಬಿ. ಗೀತಾ ಪ್ರಾಸ್ತಾವಿಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತ್ಯಾಗರಾಜ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವಾನಿ, ಸಿಆರ್ ಪಿ ಸುಧಾ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿ ಎಚ್.ವೈ. ರಕ್ಷಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಂ. ಶೀಲಾ, ಶಿಕ್ಷಕಿಯರಾದ ವಿದ್ಯಾ, ಜ್ಯೋತಿ, ಸುನಿತಾ, ರೂಪಾ, ಅಮೃತಾ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ತುಳಸಾ ನಾಯ್ಕ್ ಸ್ವಾಗತಿಸಿ, ಮುದಿಗೌಡರ್ ವಂದಿಸಿ, ಅರುಣ್ ಕುಮಾರ್ ನಿರೂಪಿಸಿದರು.

Leave a Comment

error: Content is protected !!