ಶಿಥಿಲಗೊಂಡ ಅಂಗನವಾಡಿ ಕಟ್ಟಡದ ಮೇಲ್ಛಾವಣಿ, ಅಂಗೈಯಲ್ಲಿ ಜೀವ ಹಿಡಿದು ಅಡುಗೆ ಕೋಣೆಯಲ್ಲಿ ಕುಳಿತ ಚಿಣ್ಣರು !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE ; ಮಾಜಿ ಸಚಿವ ಹರತಾಳು ಹಾಲಪ್ಪನವರ ಸ್ವಗ್ರಾಮದಲ್ಲಿನ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಗೆದ್ದಲು ಹುಳುಗಳಿಂದ ಪಕಾಶಿ, ರೀಪರ್‌ಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವುದೇ ಸಂದರ್ಭದಲ್ಲಿ ತಲೆ ಮೇಲೆ ಕುಸಿದು ಬೀಳುವುದೋ ಎಂಬ ಜೀವಭಯದಲ್ಲಿ ಅಂಗನವಾಡಿ ಶಿಕ್ಷಕಿ ಮತ್ತು ಮಕ್ಕಳನ್ನು ಇಟ್ಟುಕೊಂಡು ಮೇಲೆ ನೋಡುವಂತಾಗಿದ್ದರೂ ಕೂಡಾ ಜನಪ್ರತಿನಿಧಿಗಳಾಗಲಿ ಅಧಿಕಾರಿ ವರ್ಗದವರಾಗಲಿ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ.

ಒಂದು ಕಡೆಯಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿದ್ದರೆ ಇನ್ನೊಂದು ಕಡೆಯಲ್ಲಿ ಇಕ್ಕಟ್ಟಾದ ಜಾಗದಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ನಡುವೆ ಮಕ್ಕಳು ಅಡುಗೆಯ ಪಾತ್ರೆ, ಅಂಗನವಾಡಿ ಆಹಾರ ಪದಾರ್ಥಗಳ ದಾಸ್ತಾನಿನ ಡಬ್ಬಿಗಳ ಮಧ್ಯೆ ಕುಳಿತುಕೊಂಡಿರುವುದನ್ನು ನೋಡಿದರೆ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದೇ ಬೇಡಾ ಎನ್ನುವಂತಾಗಿದೆ.

ಅಂಗನವಾಡಿ ಹಿಂಭಾಗದಲ್ಲಿನ ಶೌಚಾಲಯಕ್ಕೆ ಮಳೆ ಬಂತು ಅಂದರೆ ಕರೆದುಕೊಂಡು ಹೋಗುವುದೇ ಕಷ್ಟವಾಗಿದೆ. ಹುಳು, ಹಪ್ಪಟೆಗಳು ಎಲ್ಲಿ ಬರುತ್ತವೇಯೋ ಎಂಬ ಭಯ ಇನ್ನೊಂದು ಕಡೆಯಲ್ಲಿ ಸಹಕಾರ ಸಂಘದ ಕಟ್ಟಡವಿದ್ದು ಅಲ್ಲಿಗೆ ಬರುವವರು ಗುಟ್ಕಾ, ಎಲೆ, ಅಡಿಕೆ ಹೀಗೆ ,ಮದ್ಯಪಾನ, ಧೂಮಪಾನ ಮಾಡಿ ಮಕ್ಕಳು ಓಡಾಡುವ ಜಾಗದಲ್ಲಿ ಬಿಸಾಕಿ ಹೋಗುವುದು ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದೋ ಎಂಬ ಚಿಂತೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಇಂತಹ ದುಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಹತ್ತಿರವಿರುವ ಹರತಾಳು ಗ್ರಾಮ ಪಂಚಾಯತ್ ಕಛೇರಿ ಮತ್ತು ಮುಂಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಪಕ್ಕದಲ್ಲಿ ಅಂಚೆ ಕಛೇರಿ ಜೊತೆಯಲ್ಲಿ ಸಹಕಾರ ಸಂಘದ ಕಛೇರಿ ಇದ್ದು ಆವುಗಳು ಸಹ ಶಿಥಿಲಗೊಂಡಿದ್ದರೂ ಕೂಡಾ ಗ್ರಾಮಾಡಳಿತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಅಂಗನವಾಡಿ ಮಕ್ಕಳ ಪೋಷಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಕಡೆಯಲ್ಲಿ ಸಿಲಿಂಡರ್ ಮತ್ತೊಂದು ಕಡೆ ಸ್ಟವ್ ಇವುಗಳ ಮಧ್ಯದಲ್ಲಿ ಅಂಗನವಾಡಿ ಮಕ್ಕಳು ಕುಳಿತಿರುತ್ತಾರೆ‌. ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡರೆ ಯಾರು ಹೊಣೆ ಎಂಬ ಚಿಂತೆ ಒಂದು ಕಡೆಯಾದರೆೆ ಮಕ್ಕಳು ಮೂತ್ರ ವಿಸರ್ಜನೆಗೆ ಹಿಂಭಾಗ ಕರೆದುಕೊಂಡು ಹೋದರೆ ವಿಷಜಂತುಗಳಿಂದ ಏನಾಗುವುದೊ ಎಂಬ ಭಯ ಈ ಬಗ್ಗೆ ಸಾಕಷ್ಟು ಭಾರಿ ಗ್ರಾಮಾಡಳಿತದ ಗಮನಕ್ಕೆ ತರಲಾದರೂ ಕೂಡಾ ಗಮನಹರಿಸುವಲ್ಲಿ ವಿಫಲರಾಗಿದ್ದಾರೆನ್ನಲಾಗಿದ್ದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕಿನ ಶಿಶು ಕಲ್ಯಾಣಾಭಿವೃದ್ದಿ ಇಲಾಖೆಯವರು ಗಮನಹರಿಸಿ ದುಸ್ಥಿತಿಯಲ್ಲಿರುವ ಅಂಗನವಾಡಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವತ್ತ ಮುಂದಾಗುವರೇ ಕಾದುನೋಡಬೇಕಾಗಿದೆ.

Leave a Comment

error: Content is protected !!