ದಾನ ಧರ್ಮದಿಂದ ಬದುಕು ಸಾರ್ಥಕ ; ಘನಬಸವ ಅಮರೇಶ್ವರ ಸ್ವಾಮೀಜಿ

Written by Malnadtimes.in

Published on:

WhatsApp Group Join Now
Telegram Group Join Now

ಸೊರಬ: ಪ್ರತಿಯೊಬ್ಬರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ದಾನ, ಧರ್ಮ ಮಾಡುವ ಮನೋಭಾವ ರೂಢಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.

ಮಂಗಳವಾರ ತಾಲೂಕಿನ ಹಾಲಗಳಲೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿಯಿಂದ ಶ್ರೀ ದೇವರಿಗೆ ಪ್ರತಿವರ್ಷದಂತೆ ಹಮ್ಮಿಕೊಂಡ ಶತರುದ್ರಾಭಿಷೇಕ, ಕ್ಷೀರಾಭಿಷೇಕ, ಎಳೆನೀರ ಅಭಿಷೇಕ ಪೂಜಾ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದ ಏಳಿಗೆಗಾಗಿ ದಾನ, ಧರ್ಮದಲ್ಲಿ ತೊಡಗಿಸಿಕೊಳ್ಳಬೇಕು. ದುಡಿಮೆಯ ಕೊಂಚ ಭಾಗವನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿನಿಯೋಗಿಸಿದರೆ ಆತ್ಮತೃಪ್ತಿಯು ದೊರೆಯುತ್ತದೆ ಜೊತೆಗೆ, ಮಕ್ಕಳಲ್ಲಿ ಉತ್ತಮ ಗುಣಗಳು ಬೆಳೆಯಲು ಅವಕಾಶವಾಗುತ್ತದೆ. ಅವರು ದೊಡ್ಡವರಾದ ತರುವಾಯ ಪೋಷಕರು ನೀಡಿದ ಸನ್ಮಾರ್ಗದಲ್ಲಿ ಸಾಗುತ್ತಾರೆ ಎಂದ ಅವರು, ವೀರಭದ್ರ ಸ್ವಾಮಿಯನ್ನು ವೀರಶೈವ ಸಮಾಜ ಮಾತ್ರವಲ್ಲದೇ ಎಲ್ಲಾ ಸಮುದಾಯವರು ಆರಾಧನೆ ಮತ್ತು ಮನೆ ದೇವರಾಗಿ ಪೂಜಿಸುತ್ತಿದ್ದಾರೆ. ವೀರಭದ್ರನ ವೀರಗುಣಗಳನ್ನು ಪ್ರತಿಬಿಂಬಿಸುವ ಆರಾಧನೆಯು ಕಟ್ಟು ನಿಟ್ಟಿನ ಆಚರಣೆಗಳು ಬಹು ಪ್ರಾಚೀನವಾದವು. ಕಾಯ, ವಾಚ ಮತ್ತು ಮನಸ್ಸಿನಿಂದ ಶ್ರೀ ಸ್ವಾಮಿಯಲ್ಲಿ ಬೇಡಿದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ಶಾಸ್ತ್ರಗಳು ತಿಳಿಸುತ್ತವೆ ಎಂದರು.

ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಅನೇಕ ಶರಣರು, ವಚನಕಾರರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಅವರ ಮಾರ್ಗದಲ್ಲಿ ಮುನ್ನೆಡೆದಾಗ ಸತ್ಪ್ರಜೆಗಳಾಗಲು ಸಾಧ್ಯವಾಗುತ್ತಿದೆ. ದೇಶವು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವುದರಿಂದ ಜಗತ್ತಿನಲ್ಲಿಯೇ ಗುರುತಿಸಲ್ಪಡುತ್ತಿದೆ. ವೀರಭದ್ರ ಸ್ವಾಮಿಯನ್ನು ಶಿವನ ಅವತಾರವೆಂದು ಪೂಜಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಶರಣರ ವಚನಗಳನ್ನು ಆಲಿಸುವುದರಿಂದ ಮಾನಸಿಕವಾಗಿ ಶುದ್ಧವಾಗಲು ಸಾಧ್ಯವಾಗುತ್ತದೆ ಎಂದರು.

ದೇವಸ್ಥಾನದ ಅರ್ಚಕ ಪುಟ್ಟಪ್ಪ ಹಿತ್ಲರ್ ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದರು. ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲಕಪ್ಪ ನಡಹಳ್ಳೇರ್, ಪ್ರಧಾನ ಕಾರ್ಯದರ್ಶಿ ಶಿವಪ್ಪ ಹಿತ್ಲರ್, ಹೇಮಪ್ಪ ಹಂಚಿನ್, ಮುದ್ದಪ್ಪ, ಗ್ರಾಮದ ಪ್ರಮುಖರಾದ ಗೆದ್ದಪ್ಪ, ವೀರಭದ್ರಪ್ಪ, ಚಂದ್ರಪ್ಪ, ವಿರೂಪಾಕ್ಷಪ್ಪ, ಬಂಗಾರಪ್ಪ, ದೇವಪ್ಪ ಸೇರಿದಂತೆ ಊರ ಗ್ರಾಮಸ್ಥರು ಇದ್ದರು.

Leave a Comment

error: Content is protected !!