ಖ್ಯಾತ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್ ಇನ್ನಿಲ್ಲ !

Written by Malnadtimes.in

Published on:

WhatsApp Group Join Now
Telegram Group Join Now

SAGARA | ಕರ್ನಾಟಕದ ಪ್ರಮುಖ, ಹಿರಿಯ ಇತಿಹಾಸ ತಜ್ಞರಾಗಿ ಖ್ಯಾತರಾಗಿದ್ದ ಕೆಳದಿ ಗುಂಡಾ ಜೋಯಿಸ್ (94) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಭಾನುವಾರ ನಿಧನರಾದರು.

ಶನಿವಾರದವರೆಗೂ ಅವರು ಕ್ರಿಯಾಶೀಲರಾಗಿದ್ದುದು ವಿಶೇಷ. ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ಹಳೆಯ ಕಾಲದ ಮೋಡಿ ಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಇವರು ಒಬ್ಬರಾಗಿದ್ದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ತಮ್ಮ 50ನೇ ವಯಸ್ಸಿನಲ್ಲಿ ಜೋಯಿಸರು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಂಎ (ಇತಿಹಾಸ) ಪದವಿಯನ್ನು ಪಡೆದಿದ್ದರು. ಗ್ರಾಮಲೆಕ್ಕಿಗರಾಗಿ, ಪೋಸ್ಟ್ ಮಾಸ್ಟರ್ ಆಗಿ, ವಿದ್ಯುತ್ ಇಲಾಖೆ, ಆಕಾಶವಾಣಿ, ವಯಸ್ಕರ ಶಿಕ್ಷಣ ಸಮಿತಿ, ಕನ್ನಡ ಸಂಸ್ಕೃತಿ ಪ್ರಸಾರದ ಉಪನ್ಯಾಸಕರಾಗಿ, ಶಿವಮೊಗ್ಗದ ಸರ್ಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ, ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಚಾಧಿಕಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

1962 ರಿಂದ1975 ರವರೆಗೆ ಮೈಸೂರು ಹಾಗು ಧಾರವಾಡದ ವಿವಿ ಇತಿಹಾಸದ ಪ್ರಾಧ್ಯಾಪಕರಾಗಿ 1980 ರಿಂದ 1985 ರವರೆಗೆ ಕರ್ನಾಟಕ ಇತಿಹಾಸ ದಾಖಲೆ ಸಂಶೋಧನಾ ಸಮಿತಿಯ ಸದಸ್ಯರು ಆಗಿದ್ದರು.

ತಮ್ಮ 17ನೇ ವಯಸ್ಸಿನಿಂದಲೇ ಜೋಯಿಸರು ಕೆಳದಿಯ ಇತಿಹಾಸದ ಸಂಶೋಧನೆ ಆರಂಭಿಸಿ 1960 ರಲ್ಲಿ ತಮ್ಮ ಮನೆಯಲ್ಲಿಯೇ ಐತಿಹಾಸಿಕ ವಸ್ತು ಸಂಗ್ರಹಾಲಯ ಪ್ರಾರಂಭಿಸಿ 1989ರ ನಂತರ ಸರಕಾರಕ್ಕೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಪ್ರಾಚೀನ ಓಲೆಗರಿ ಹಸ್ತಪ್ರತಿ ಸೂಚಿಯನ್ನು ತಯಾರಿಸಿಕೊಟ್ಟಿದ್ದರು ಗುಂಡಾ ಜೋಯಿಸರು.

ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ, ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ,ಕೆಳದಿಯ ಸಂಕ್ಷಿಪ್ತ ಇತಿಹಾಸ, ಇಕ್ಕೇರಿ ಅರಸರು, ಬಿದನೂರಿನ ಕೆಳದಿ ನಾಯಕರು, ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಮೊದಲಾದ 30ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ.

Leave a Comment

error: Content is protected !!