ಕೃಷಿ, ಜೀವನಕ್ಕೆ ಅವಶ್ಯಬೇಕಾದ ಅರಣ್ಯ, ನೀರು ದುರ್ಲಭವಾಗಿದೆ

Written by Malnadtimes.in

Published on:

WhatsApp Group Join Now
Telegram Group Join Now

ಸೊರಬ : ಕಂದಾಯ ಇಲಾಖೆಯ ಅಸಮರ್ಪಕ ನೀತಿ, ನಿಯಮಾವಳಿಯಿಂದಾಗಿ ಗ್ರಾಮ ಭೂಮಿಗಳು ಸ್ವಾರ್ಥಿಗಳ ಪಾಲಾಗುತ್ತಿದೆ. ಭೂ ರಹಿತರು ಭೂಮಿ ವಂಚಿತರಾಗಿಯೆ ಉಳಿದಿದ್ದಾರೆ. ಸ್ವಾರ್ಥ ಲಾಲಸೆಗೆ ಕೃಷಿ ಜೀವನಕ್ಕೆ ಅವಶ್ಯಬೇಕಾದ ಅರಣ್ಯ, ನೀರು ದುರ್ಲಭವಾಗಿದೆ ಎಂದು ಚಂದ್ರಗುತ್ತಿ ಹೋಬಳಿ ಹೊಳೆಮರೂರು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.

ವೃಕ್ಷಲಕ್ಷ ಆಂದೋಲನ, ಜೀವವೈವಿಧ್ಯ ಮಂಡಳಿ, ಜೀವವೈವಿಧ್ಯ ನಿರ್ವಹಣಾ ಸಮಿತಿ, ಪರಿಸರ ಜಾಗೃತಿ ಟ್ರಸ್ಟ್ ವಿಶ್ವ ಜೀವವೈವಿಧ್ಯ ದಿನದ ಅಂಗವಾಗಿ ಹಮ್ಮಿಕೊಂಡಿರುವ ನದಿ, ನದಿ ಕಣಿವೆ, ನದಿತೀರದ ಜಾಥಾ ಗ್ರಾಮಕ್ಕೆ ತೆರಳಿದ್ದಾಗ ಜಾಥಾ ತಂಡದವರೊಂದಿಗೆ ಮಾತನಾಡಿದರು.

ಈ ಹಿಂದೆ ಸ.ನಂ. 102 ಸಾಮಾಜಿಕ ಅರಣ್ಯವನ್ನು ಕಂದಾಯ ಇಲಾಖೆ ತಹಶೀಲ್ದಾರ್ ನಾಲ್ಕು ಜನರಿಗೆ ಮಂಜೂರು ಮಾಡಿದ್ದರು. ಮಂಜೂರಾತಿಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಮಂಜೂರಾತಿ ರದ್ದಾಗಿತ್ತು, ಕೃಷಿ ಚಟುವಟಿಕೆಯೂ ಇರಲಿಲ್ಲ. ಈಗ ಮತ್ತೆ ಆ ನಾಲ್ಕು ಮಂದಿ ಹಂತಹಂತವಾಗಿ ಅಲ್ಲಿನ ಗಿಡಮರಗಳನ್ನು ಸವರುವ ಮೂಲಕ ಅರಣ್ಯ ನಾಶಕ್ಕೆ ಮುಂದಾಗಿದ್ದು ಗ್ರಾಮ ಪ್ರಬಲ ವಿರೋಧ ವ್ಯಕ್ತಪಡಿಸಿದೆ.

ಕೆಲ ದಿನಗಳ ಹಿಂದೆ ಇಲ್ಲಿನ ಸ.ನಂ. 121, 132 ಕಂದಾಯ ಜಾಗದಲ್ಲಿದ್ದ ಅಪಾರ ವೃಕ್ಷ ಸಮೂಹವನ್ನು ನಾಶಪಡಿಸಲಾಗಿತ್ತು. ದೂರು, ಆಕ್ಷೇಪ ಸಲ್ಲಿಕೆ, ಆಗ್ರಹದ ನಂತರ ನಾಶ ತಡೆದು ಗ್ರಾಮಕ್ಕೆ ಅರಣ್ಯ ಪ್ರದೇಶ ಉಳಿದುಕೊಂಡಿದೆ. ಪುನಃ ವನೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಿರುವುದು ನಮಗೆ ಸಂತಸ ತಂದಿದೆ. ಗ್ರಾಮದ ನೈಸರ್ಗಿಕ ಸಂಪತ್ತು ಯಾವುದೇ ಕಾರಣಕ್ಕೂ ನಾಶವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಗ್ರಾಮದ ಅರಣ್ಯವಿರುವ ಎಲ್ಲ ಕಂದಾಯಭೂಮಿಯೂ ರಕ್ಷಣೆಯಾಗಬೇಕು. ತುರ್ತು ಗಡಿ ನಿರ್ಧರಿಸಿ ಬೇಲಿ ಅಥವಾ ಅಗಳವಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಉಪ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತೇವೆ ಎಂದರು.

ಜೀವವೈವಿಧ್ಯ ಮಂಡಳಿಯ ಅಧಿಕಾರಿ ಪ್ರಸನ್ನ ಜೀವವೈವಿಧ್ಯ ಕಾಯ್ದೆ ಬಗ್ಗೆ ವಿವರಿಸಿ, ಗ್ರಾಮ ಅರಣ್ಯ, ಕೆರೆ, ನದಿ, ಮುಂತಾದ ನಿಸರ್ಗ ಸಂಪನ್ಮೂಲಗಳನ್ನು ಗ್ರಾಮ ಪಂಚಾಯತಿ ಮೂಲಕ ಕಾಯ್ದುಕೊಳ್ಳಲು ಅಧಿಕಾರವಿದೆ. ಕಾಯ್ದೆ ಪಾಲನೆಯಾಗಬೇಕು ಎಂದು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರು.

ಜಾಥಾ ತಂಡ ಅಂದವಳ್ಳಿ ಸ.ನಂ. 236, 261ರ ಒತ್ತೂವರಿ ಜಾಗಕ್ಕೆ ತೆರಳಿ ರಕ್ಷಣೆಗೆ ಮುಂದಾಗಲು ಸೂಚಿಸಲಾಯಿತು.

ಗ್ರಾಮದ ಗಂಗಾಧರ್ ಗೌಡ, ಚಂದ್ರಶೇಖರ್ ಗೌಡ, ಜೈರಾಮ, ಮಲ್ಲಿಕಾರ್ಜುನ, ವೀರೇಂದ್ರ ಗೌಡ, ಏ.ಕೆ ಗಂಗಾಧರ, ಆದರ್ಶ ಗೌಡ, ವಿನಾಯಕ, ನೀಲಕಂಠ ಗೌಡ, ಕುಮಾರ್ ಗೌಡ, ಶಶಾಂಕ, ಪ್ರಮೋದ್ ಗೌಡ, ವಿರೇಶ ಸೇರಿದಂತೆ ಗ್ರಾಮಸ್ಥರು, ಮಂಜುನಾಥ ಶೇಟ್ ತೋರಣಗೊಂಡನಕೊಪ್ಪ ಇದ್ದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಪಜಾ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಪ್ರಧಾನ ಕಾರ್ಯದರ್ಶಿ ಸಿ.ಪಿ.ವೀರೇಶಗೌಡ, ಜೀವವೈವಿಧ್ಯ ಮಂಡಳಿ ಅಧಿಕಾರಿ ಕುಮಾರ್, ಪವಿತ್ರಾ, ತಾಪಂ ಇಒ ರವೀಂದ್ರ, ಆರ್ಎಫ್ಒ ಜಾವೀದ್, ಸಂಜಯ್, ಫಾರೆಸ್ಟರ್ ಮೌನೇಶ್, ಗ್ರಾಪಂ ಚಂದ್ರಗುತ್ತಿ ಪಿಡಿಒ ನಾರಾಯಣ್, ತಾಪಂ ಸುಬ್ಬುರಾಜ್, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು.

Leave a Comment

error: Content is protected !!