ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ | ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ; ರಂಭಾಪುರಿ ಶ್ರೀಗಳು ಅಭಿಮತ

Written by Malnadtimes.in

Updated on:

WhatsApp Group Join Now
Telegram Group Join Now

ಅಜ್ಜಂಪುರ : ನಾಡು ನುಡಿಗಳ ಬಗೆಗೆ ಎಲ್ಲರಲ್ಲಿ ಸ್ವಾಭಿಮಾನ ಬೆಳೆದು ಬರುವ ಅವಶ್ಯಕತೆಯಿದೆ. ಸ್ವಾಭಿಮಾನ ಇಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಾಗದು. ಕರ್ನಾಟಕ (Karnataka) ಹೆಸರಾಯಿತು ಆದರೆ ಉಸಿರಾಗಬೇಕು ಕನ್ನಡ (Kannada) ಎಂದು ಬಾಳೆಹೊನ್ನೂರು (Balehonnur) ಶ್ರೀ ರಂಭಾಪುರಿ (Rambhapuri) ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ತಾಲೂಕಿನ ಕಾಟಿಗನೆರೆ (Katiganere) ಗ್ರಾಮದಲ್ಲಿ ಜರುಗಿದ ಅಜ್ಜಂಪುರ (Ajjampura) ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಪಡಿಸುವುದನ್ನು ಯಾರೂ ನಿರ್ಲಕ್ಷ್ಯ ಮಾಡಬಾರದು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಸೊರಗುತ್ತಿರುವುದು ನೋವಿನ ಸಂಗತಿ. ಕನ್ನಡ ಭಾಷೆಯಲ್ಲಿರುವ ಸೊಗಡು ಸೌಂದರ್ಯ ಬೇರೆಲ್ಲಿಯೂ ಕಾಣಲಾಗದು. ಕರ್ನಾಟಕದ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳು ಕ್ಷೀಣಿಸುತ್ತಿವೆ. ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ. ದಿನ ನಿತ್ಯದಲ್ಲಿ ಕನ್ನಡ ಬಳಕೆ ಕಲಿಕೆ ಹಾಗೂ ಪ್ರೋತ್ಸಾಹ ಸಿಗುವಂತಾಗಬೇಕು. ಹೆತ್ತ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಇಂಗ್ಲೀಷ್ ಕಾನ್ವೆಂಟ್ ಸ್ಕೂಲಿಗೆ ಕಳಿಸುವರೆಷ್ಟೋ ಜನರಿದ್ದಾರೆ. ಕನ್ನಡ ಶಾಲೆಯಲ್ಲಿ ಓದಲು ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಅಜ್ಜಂಪುರ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಸಣ್ಣ ಕಾಟಿಗನೆರೆ ಗ್ರಾಮದಲ್ಲಿ ಜರುಗುತ್ತಿರುವುದು ಸಂತೋಷದ ಸಂಗತಿ. ನಿವೃತ್ತ ಶಿಕ್ಷಕ ಜಿ.ಉಮಾಪತಿ ಆರಾಧ್ಯರ ಕನ್ನಡ ಭಾಷಾಭಿಮಾನ ಚಿಂತನೆ ಈ ಸಮಾರಂಭಕ್ಕೆ ಸ್ಫೂರ್ತಿಯಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ.ಸಂತೋಷ ಹಾನಗಲ್ ಸಮಾರಂಭ ಉದ್ಘಾಟಿಸಿದ ನಂತರ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಸಂತೋಷ ಹಾನಗಲ್ ಮಾತನಾಡಿ, ಕನ್ನಡ ನಾಡಿನಲ್ಲಿಯೇ ಕನ್ನಡಕ್ಕೆ ಪ್ರಾಧಾನ್ಯತೆ ದೊರೆಯದಿರುವುದು ಖೇದಕರ ಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕನ್ನಡಕ್ಕೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ನೀಡುವ ಅವಶ್ಯಕತೆ ಇದೆ ಎಂದರು.

ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವ್ವಾಮಿಗಳು ಮತ್ತು ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಸಮ್ಮೇಳನಾಧ್ಯಕ್ಷರಾದ ಎ.ಸಿ.ಚಂದ್ರಪ್ಪ ಮಾತನಾಡಿ ಕನ್ನಡ ನಮ್ಮೆ ಹೆಮ್ಮೆ. ಕನ್ನಡ ನಾಡು ನುಡಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾದ ಅವಶ್ಯಕತೆ ಇದೆ ಎಂದರು.

ನಿವೃತ್ತ ಶಿಕ್ಷಕ ಜಿ.ಉಮಾಪತಿ ಆರಾಧ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ ಆಶಯ ನುಡಿ ನುಡಿದರು. ತಾಲ್ಲೂಕ ಕಸಾಪ ಅಧ್ಯಕ್ಷ ಹೆಚ್.ಆರ್.ಚಂದ್ರಪ್ಪ ಪ್ರಾಸ್ತಾವಿಕ ನುಡಿದರು.

ಮುಖ್ಯ ಅತಿಥಿಗಳಾಗಿ ಬಿ.ಪಿ.ಶಿವಮೂರ್ತಿ, ಚಿ.ಸ.ಪ್ರಭುಲಿಂಗಸಾಸ್ತ್ರಿ ಭಾಗವಹಿಸಿದ್ದರು. ನಿ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ.ಶಿವಮೂರ್ತಿ ಭಾಷಣ ಪ್ರತಿ ಬಿಡುಗಡೆ ಮಾಡಿದರು. 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಓ.ಮಮತೇಶ ಪ್ರಸ್ತುತ ಸಮ್ಮೇಳನಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಕೆ.ಆರ್. ಕಾತ್ಯಾಯಿನಿ ಇವರಿಂದ ಪ್ರಾರ್ಥನೆ, ಜ್ಯೋತಿ ತಂಡದವರಿಂದ ನಾಡಗೀತೆ, , ಮಂಜುಳ ಹರಿನಹಳ್ಳಿ ಇವರಿಂದ ನಿರೂಪಣೆ, ನಡೆದವು.

Read more:ಹೊಂಬುಜ ಶ್ರೀಗಳ ಜನ್ಮದಿನದ ಸಂದೇಶ | ಸರ್ವರೂ ಕ್ಷೇಮಾಭ್ಯುದಯದ ಧಾರ್ಮಿಕ ಪ್ರಜ್ಞಾವಂತರಾಗಬೇಕು

Leave a Comment

error: Content is protected !!