ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾ.ಪಂ. ವ್ಯಾಪ್ತಿಯಲ್ಲೇ ಇಲ್ಲ ಶೌಚಾಲಯ !

Written by Malnadtimes.in

Published on:

WhatsApp Group Join Now
Telegram Group Join Now

KALASA : ತಾಲ್ಲೂಕಿನ ಇಡಕಣಿ ಗ್ರಾಮ ಪಂಚಾಯತಿಯು 2022-23ನೇ ಸಾಲಿನ “ಗಾಂಧಿ ಗ್ರಾಮ ಪುರಸ್ಕಾರಕ್ಕೆ” ಪಾತ್ರವಾಗಿತ್ತು. ಆದರೆ ವಿಪರ್ಯಾಸ ಎಂದರೆ ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಿರೇಬೈಲ್ ಎಂಬ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಸಾರ್ವಜನಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.

ಸುತ್ತಮುತ್ತಲಿನ ಕೆಲವು ಹಳ್ಳಿಗಳಿಗೆ ಹಿರೇಬೈಲ್ ಕೇಂದ್ರ ಬಿಂದುವಾಗಿದ್ದು ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್, ಬಸ್ ನಿಲ್ದಾಣ ಹೀಗೆ ಇನ್ನಿತರ ಸೌಲಭ್ಯಗಳಿಗೆ ಹಿರೇಬೈಲ್ ಅನ್ನು ಆಶ್ರಯಿಸಬೇಕಾಗಿದೆ. ಹೀಗಾಗಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಿರೇಬೈಲ್ ಪಟ್ಟಣಕ್ಕೆ ಆಗಮಿಸುತ್ತಾರೆ. ಜೊತೆಗೆ ಈ ಪಟ್ಟಣ ಕೊಟ್ಟಿಗೆಹಾರ ಮತ್ತು ಕಳಸದ ಮುಖ್ಯ ರಸ್ತೆಯಲ್ಲಿದೆ. ಹಿರೇಬೈಲ್ ಪಟ್ಟಣದಿಂದ ಸಮೀಪದ ಹೆಮ್ಮಕ್ಕಿ, ಸಿಡ್ಲಾರ್ ಮಕ್ಕಿ, ಕೋಟೆಮಕ್ಕಿ, ಎಡೂರು, ಗುಮ್ಮನ್ ಖಾನ್, ಎಳಂದೂರು, ಮಲ್ಲೇಶನ ಗುಡ್ಡ ಹೀಗೆ ಕೆಲವು ಹಳ್ಳಿಗಳಿಗೆ ಬಸ್ ಸೌಲಭ್ಯ ಕೂಡ ಇಲ್ಲ ಹಾಗಾಗಿ ಸಾರ್ವಜನಿಕರು ತಮ್ಮ ಊರಿಂದ ಬರಲು ಮತ್ತು ವಾಪಸ್ ತೆರಳಲು ಜೀಪ್ ಮತ್ತು ಆಟೋದಂತಹ ವಾಹನಗಳನ್ನು ಆಶ್ರಯಿಸಿಬೇಕಾಗಿದೆ.

ಕೆಲವೊಮ್ಮೆ ಹಿರೇಬೈಲ್ ನಿಂದ ತೆರಳಲು ವಾಹನಗಳಿಗೆ ಕೆಲವು ಸಮಯ ಕಾಯಬೇಕಾಗದ ಅನಿವಾರ್ಯತೆ ಕೂಡ ಇದೆ. ಹಳ್ಳಿಗಳಿಂದ ಬರುವ ಜನರು ಕೆಲವೊಮ್ಮೆ ತಮ್ಮ ಕೆಲಸಗಳು ಮುಗಿಯವರೆಗೂ ಹಿರೇಬೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಕೂಡ ಇದೆ. ಎಲ್ಲ ಸೌಲಭ್ಯಗಳಿಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಹಿರೇಬೈಲನ್ನು ಆಶ್ರಯಿಸಬೇಕಾಗಿದ್ದು, ಇಂತಹ ಒಂದು ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಇರುವುದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹಿರೇಬೈಲ್ ಪಟ್ಟಣದಲ್ಲಿ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಈ ಬಗ್ಗೆ ಇನ್ನಾದರೂ ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯಿತಿ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

‘ನಾವು ಬ್ಯಾಂಕ್ ಅಥವಾ ಇನ್ನಿತರ ಯಾವುದೇ ಕೆಲಸಗಳಿಗೆ ಹಿರೇಬೈಲಿಗೆ ಬರಬೇಕು, ಕೆಲವೊಮ್ಮೆ ರಶ್ ಇದ್ದರೆ ಸಂಜೆವರೆಗೂ ಇಲ್ಲೇ ಕಾಯಬೇಕು. ಹಿರೇಬೈಲ್ ನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಶೌಚಾಯಲಕ್ಕೆ ಹೋಗಲು ತುಂಬಾ ಸಮಸ್ಯೆಯಾಗುತ್ತದೆ. ಹಾಗಾಗಿ ಆದಷ್ಟು ಬೇಗ ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯತಿ ವತಿಯಿಂದ ಶೌಚಾಲಯವನ್ನು ನಿರ್ಮಿಸಿಕೊಡಬೇಕು.
– ಕೋಟೆಮಕ್ಕಿ ಗ್ರಾಮಸ್ಥೆ

Leave a Comment

error: Content is protected !!