ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾನುವಾರ ಮಧ್ಯಾಹ್ನದ ವೇಳೆ ಬಿರುಗಾಳಿ ಸಹಿತ, ಗುಡುಗು ಸಿಡಿಲಬ್ಬರದಿಂದ ಕೂಡಿದ ಭಾರೀ ಮಳೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ, ಮಲ್ಲಂದೂರು ಭಾಗದಲ್ಲಿ ಭಾರೀ ಮಳೆಯಾಗಿದೆ.
ಸಿಡಿಲು ಸಹಿತ ಭಾರಿ ಗಾಳಿಯೊಂದಿಗೆ ಮಳೆಯಾಗಿದ್ದು, ಶಿರವಾಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಮಳೆಯಿಂದ ಪರದಾಡುವಂತಾಗಿದೆ.
ಎನ್.ಆರ್.ಪರ, ಕೊಪ್ಪ, ಕಳಸ ಭಾಗದಲ್ಲೂ ಭಾರಿ ಮಳೆಯಾಗಿದ್ದು, ನಿರಂತರ ಮಳೆಯಿಂದ ರೈತರು, ಕೃಷಿಕರು ಸಂತಸಗೊಂಡಿದ್ದಾರೆ. ಬಿಸಿಲ ಬೇಗೆಯಿಂದ ಕಾದ ಕಾವಲಿಯಂತಾಗಿದ್ದ ಧರೆಗೆ ತಂಪೆರೆದಿದೆ.
ಮಳೆ ತಂದ ಅವಾಂತರ :
ಇನ್ನೂ ಭಾರಿ ಗಾಳಿಯಿಂದಾಗಿ ಮರಗಳು ಧರೆಗುರುಳಿದ್ದು ಹಲವು ಮನೆಗಳು ಜಖಂಗೊಂಡಿವೆ. ಎನ್.ಆರ್.ಪುರ ತಾಲೂಕಿನ ಕಾನೂರು ಪಂಚಾಯತ್ ವ್ಯಾಪ್ತಿಯ ಕಟ್ಟಿನಮನೆ ಗ್ರಾಮದಲ್ಲಿ ಮರ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಮತ್ತೊಂದೆಡೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಮೂವರ ಸ್ಥಿತಿ ಗಂಭೀರವಾಗಿದ್ದು ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.