ಪತ್ರಕರ್ತನ ಮೊಬೈಲ್ ಕಸಿದು ಹಲ್ಲೆಗೆ ಯತ್ನಿಸಿ ಪೋಕ್ಸೋ ಕೇಸ್ ಹಾಕುವುದಾಗಿ ಬೆದರಿಸಿ ದರ್ಪ ತೋರಿದ ಸಿಪಿಐ ! ಠಾಣೆ ಎದುರು ಪ್ರತಿಭಟನೆ

Written by Malnadtimes.in

Published on:

WhatsApp Group Join Now
Telegram Group Join Now

THIRTHAHALLI | ಪತ್ರಕರ್ತನ ಮೇಲೆ ತೀರ್ಥಹಳ್ಳಿ ಸಿಪಿಐ ದರ್ಪ ತೋರಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದನ್ನು ವಿರೋಧಿಸಿ ಪೊಲೀಸ್ ಠಾಣೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪತ್ರಕರ್ತ ವಿ. ನಿರಂಜನ್ ಗೆ ಸಿಪಿಐ ಅಶ್ವತ್ಥ್ ಗೌಡ ಬೆದರಿಕೆ ಹಾಕಿದ್ದಾರೆ. ತೀರ್ಥಹಳ್ಳಿ ಠಾಣೆಗೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದರು. ರಥ ಬೀದಿಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಸರಿಪಡಿಸುವಂತೆ ಸಾರ್ವಜನಿಕರು ಕೇಳಿದ್ದಾರೆ.

ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ಘಟನೆಯನ್ನು ವರದಿಗಾರ ನಿರಂಜನ್ ವಿಡಿಯೋ ಮಾಡಿದ್ದಾರೆ. ಇದನ್ನು ಗಮನಿಸಿದ ತೀರ್ಥಹಳ್ಳಿ ಸಿಪಿಐ ಅಶ್ವತ್ಥ್ ಗೌಡ ಬಲವಂತವಾಗಿ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿ ಬೆದರಿಕೆ ಹಾಕಿದ್ದಾರೆ. ಪೋಕ್ಸೋ ಕೇಸು ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ದೂರು :

ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಗೆ ದೂರು ನೀಡಿರುವ ಪತ್ರಕರ್ತ ನಿರಂಜನ್, ತೀರ್ಥಹಳ್ಳಿಯಲ್ಲಿ ಆ. 21ರ ಸಂಜೆ 5 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಜಿಲ್ಲಾ ರಕ್ಷಣಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್ ಅವರು ಆಗಮಿಸಿದ ಕಾರಣ ಪತ್ರಿಕೆಯ ವರದಿಗಾಗಿ ತೆರಳಿರುತ್ತೇನೆ. ರಕ್ಷಣಾಧಿಕಾರಿಗಳು ಪೊಲೀಸ್ ಠಾಣೆಯಿಂದ ನಿರ್ಗಮಿಸುತ್ತಿರುವಾಗ ಟ್ರಾಫಿಕ್ ಜಾಮ್ ಆಗಿರುತ್ತದೆ. ಈ ವೇಳೆ ಕರ್ತವ್ಯದ ಸಲುವಾಗಿ ಅದನ್ನು ನನ್ನ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದೆ. ಈ ಸಮಯದಲ್ಲಿ ಏಕಾಏಕಿ ನನ್ನ ಮೇಲೇರಿ ಬಂದ ಪೊಲೀಸ್ ಠಾಣಾಧಿಕಾರಿ ಅಶ್ವಥ್ ಗೌಡ ಜೀವ ಬೆದರಿಕೆ ಹಾಕಿದ್ದಲ್ಲದೇ ನನ್ನ ಮೊಬೈಲ್ ಫೋನ್ ಸುಲಿಗೆ ಮಾಡಿದ್ದಾರೆ.

ಸಿಪಿಐ ಅಶ್ವತ್ಥ್ ಗೌಡ

ಈ ಮೂಲಕ ಪತ್ರಕರ್ತನಾಗಿ ನನ್ನ ಕರ್ತವ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ತೆರಳಿದಾಗ ನಿನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುತ್ತೇನೆ ಎಂದು ಬೆದರಿಸುವ ಮೂಲಕ ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೇ ನಾನು ಪೊಲೀಸ್ ಠಾಣೆಯ ಹೊರಭಾಗದ ಸಾರ್ವಜನಿಕ ಸ್ಥಳದಲ್ಲಿ ನನ್ನ ಮೊಬೈಲ್‌ನಲ್ಲಿ ಚಿತ್ರಿಸಿದ ವಿಡಿಯೋ ಡಿಲೀಟ್ ಮಾಡಿದ್ದು ನಾನು ಸಂಗ್ರಹಿಸಿದ್ದ ಮಾಹಿತಿ ನಾಶವಾಗಿರುತ್ತದೆ. ಇದರಿಂದ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಆಗಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ :

ಪತ್ರಕರ್ತ ನಿರಂಜನ್ ಗೆ ಬೆದರಿಕೆ ಹಾಕಿದ ಸಿಪಿಐ ವರ್ತನೆ ಖಂಡಿಸಿ ಠಾಣೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ದಬ್ಬಾಳಿಕೆ ನಡೆಸಿದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಾಜಿ ಸಚಿವರ ಭೇಟಿ :

ತೀರ್ಥಹಳ್ಳಿ ಪೊಲೀಸ್ ಠಾಣೆ ಎದುರು ಪತ್ರಕರ್ತರ ಪ್ರತಿಭಟನೆ ನಡೆಸಿದ ಮಾಹಿತಿ ತಿಳಿದ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ಕೂಡ ಆಗಮಿಸಿದ್ದಾರೆ.

ಖಂಡನೆ :

ತೀರ್ಥಹಳ್ಳಿ ಪತ್ರಕರ್ತ ನಿರಂಜನ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿರುವ ತೀರ್ಥಹಳ್ಳಿ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

ಪತ್ರಕರ್ತ ನಿರಂಜನ್ ಮೇಲೆ ದೈಹಿಕ ಹಲ್ಲೆಗೂ ಯತ್ನಿಸಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ನಡೆದ ದಬ್ಬಾಳಿಕೆ. ಇದನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಆಗ್ರಹಿಸಿದ್ದಾರೆ.

Leave a Comment

error: Content is protected !!