Council Election | ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ; ಹರತಾಳು ಹಾಲಪ್ಪ

Written by Malnadtimes.in

Published on:

WhatsApp Group Join Now
Telegram Group Join Now

Ripponpete | ಸೋಮವಾರ ನಡೆಯುವ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿಕೂಟದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಸಚಿವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ (Harathalu Halappa) ಹೇಳಿದರು.

ರಿಪ್ಪನ್‌ಪೇಟೆಯ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಅತಿ ಹೆಚ್ಚು ಶ್ರಮವಹಿಸಿ ಅಭ್ಯರ್ಥಿಗಳ ಪರವಾಗಿ ಮತದಾರರ ಭೇಟಿ ಮಾಡಿ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅಲ್ಲದೆ ಬಿಜೆಪಿ ಡಾ.ಧನಂಜಯ ಸರ್ಜಿ (Dr. Dhananjaya Sarji) ಮತ್ತು ಜೆಡಿಎಸ್ ಎಸ್.ಎಲ್. ಭೋಜೆಗೌಡ (S.L. Bhojegowda) ಮೈತ್ರಿ ಅಭ್ಯರ್ಥಿಗಳು 100 ಪ್ರತಿಶತ ಮೊದಲ ಪ್ರಾಶಸ್ತ್ಯ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿನ ಮತಗಟ್ಟೆ ಸಮೀಕ್ಷೆಯಲ್ಲಿ ಎನ್.ಡಿ.ಎ.ಪಡೆಯುವುದರ ಬಗ್ಗೆ ಮತಗಟ್ಟೆ ಸಮೀಕ್ಷಾ ವರದಿಗಳು ಬಂದಿದ್ದು ಈ ಭಾರಿಯಲ್ಲಿಯೂ ಸಹ ಕೇಂದ್ರದಲ್ಲಿ ಮೋದಿಜಿಯವರು ನಿಶ್ಚಳ ಬಹುಮತದೊಂದಿಗೆ ಹ್ಯಾಟ್ರಿಕ್ ಸಾಧನೆಯೊಂದಿಗೆ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರೊಂದಿಗೆ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸಹ ಗೆಲುವು ನಿಶ್ಚಿತವಾಗಿದೆ ಎಂದರು.

ಸಿಬಿಐಗೆ ವಹಿಸಲು ಆಗ್ರಹ:
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅತ್ಮಹತ್ಯೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಂ.ಎಸ್.ಐ.ಎಲ್. ನಿಗಮದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವ ನನಗೆ ಇರುವ ಅನುಭವದ ಪ್ರಕಾರ ಒಂದು ನಿಗಮದಿಂದ ಹಣ ವರ್ಗಾವಣೆಗೆ ಅದರದೇ ಆದ ನಿಯಮಾವಳಿ ಇದೆ. ಆದರೆ ಅದನ್ನೆಲ್ಲಾ ಗಾಳಿಗೆ ತೂರಿ ಪ್ರಭಾವಿ ವ್ಯಕ್ತಿಗಳ ಹುನ್ನಾರದಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಕೃಪಾಪೋಷಿತ ಬೇನಾಮಿ ಕಂಪನಿಗಳಿಗೆ ನಿಗಮದ ಹಣ ವರ್ಗಾವಣೆಯಾಗಿದೆ. ರಾಜ್ಯ ಸರ್ಕಾರ ಸಚಿವರ ಪರ ಬೆನ್ನಿಗೆ ಇರಬಹುದು. ಆದರೆ ಬಂಧನವಾಗುವುದಂತು ಸತ್ಯ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಪಕ್ಷದ ಮುಖಂಡರಾದ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪಿ.ರಮೇಶ್, ಸುಧೀಂದ್ರ ಪೂಜಾರಿ, ಲೀಲಾ ಉಮಾಶಂಕರ್, ನೆವಟೂರು ದೇವೇಂದ್ರಪ್ಪಗೌಡ, ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಮಂಜುಳಾ ಕೇತಾರ್ಜಿರಾವ್, ಮುರುಳಿ ಕೆರೆಹಳ್ಳಿ, ಇನ್ನಿತರರು ಹಾಜರಿದ್ದರು.

Leave a Comment

error: Content is protected !!