ನನ್ನ ವಿರುದ್ಧ ಷಡ್ಯಂತರ ನಡೆಸಿದ ಸಂಸದ ಬಿ.ವೈ. ರಾಘವೇಂದ್ರರನ್ನ ಬಂಧನವಾಗಬೇಕು ; ಕೆ.ಎಸ್. ಈಶ್ವರಪ್ಪ

Written by Malnadtimes.in

Published on:

WhatsApp Group Join Now
Telegram Group Join Now

ಶಿವಮೊಗ್ಗ : ಅನುಮತಿ ಇಲ್ಲದೆ ನನ್ನ ಪೋಟೋ ವಿಡಿಯೋಗಳನ್ನು ತಿರುಚಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರಹಗಳನ್ನು ಹರಿಬಿಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಷಡ್ಯಂತರವಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಸ್.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರವಾಗಿ ಸ್ಪರ್ಧೆಗೆ ನಿಂತ ಮೇಲೆ ಬಿ.ವೈ.ರಾಘವೇಂದ್ರ ಅವರು ಇಲ್ಲದ ಷಡ್ಯಂತರ ಮಾಡಿದರು. ಜಾತಿಯ ಹೆಸರಿನಲ್ಲಿ ಮತಕೇಳುತ್ತ ಹಿಂದು ಧರ್ಮದ ಮಾತೇ ಆಡಲಿಲ್ಲ. ಶಿಕಾರಿಪುರದಲ್ಲಿ ನಾನು ಗೆಲ್ಲಬಾರದೆಂದು ವಾಮಾಚಾರ ಮಾಡಿದರು. ನನ್ನ ಪ್ರಚಾರಕ್ಕೆ ಅಡ್ಡಿಪಡಿಸಿದರು. ಕೊನೆಗೆ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ವಿಡಿಯೋವನ್ನು ಹರಿಬಿಟ್ಟರು. ಕಳೆದ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದ ವಿಡಿಯೋವನ್ನೇ ಈ ಬಾರಿ ಎಂಬಂತೆ ಬಿಂಬಿಸಿದರು. ಪತ್ರಿಕೆಯಲ್ಲಿ ಪ್ರಕಟವಾದಂತೆ ನಾನು ಕಣದಿಂದೆ ಹಿಂದೆ ಸರಿದಿದ್ದೇನೆ. ರಾಘವೇಂದ್ರ ಅವರಿಗೆ ಮತ ನೀಡಿ ಎಂಬ ಬರಹವನ್ನು ಹಬ್ಬಿಸಿದರು. ಇದೆಲ್ಲ ರಾಘವೇಂದ್ರ ಅವರ ಕುತಂತ್ರವೇ ಆಗಿದೆ ಎಂದು ಹರಿಹಾಯ್ದರು.

ನನಗೆ ಈಗ ಬಹಳ ಅನ್ಯಾಯವಾಗಿದೆ. ನಾನು ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇನೆ. ಮೇ 15ರ ವರೆಗೆ ಸಮಯ ನೀಡುತ್ತೇನೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯಲ್ಲಿನ ಶುದ್ಧೀಕರಣಕ್ಕಾಗಿ, ಕುಟುಂಬ ರಾಜಕಾರಣವನ್ನು ವಿರೋಧಿಸಿ, ಹಿಂಧುತ್ವದ ರಕ್ಷಣೆಗಾಗಿ ಚುನಾವಣೆಗೆ ನಿಂತಿದ್ದೆ, ನನಗೆ ಅಪಾರ ಬೆಂಬಲ ಸಿಕ್ಕಿದೆ ಹಿಂದುಳಿದವರು, ದಲಿತರು ಮುಂತಾದ ಅನೇಕರು ನನಗೆ ಮತ ಹಾಕಿದ್ದಾರೆ. ಆಯನೂರು ಮಂಜುನಾಥ ಕೂಡ ನನಗೆ ಮತ ಹಾಕುವುದಾಗಿ ಹೇಳಿದ್ದರು. ಆದರೆ ಈ ಫೇಕ್ ವಿಡಿಯೋ ನೋಡಿ ಅವರು ಹಾಕಿಲ್ಲ, ಹೀಗೆ ಕಾಂಗ್ರೆಸ್ಸಿನವರ ಅನೇಕ ಮತಗಳು ನನಗೆ ಮಿಸ್ಸಾಗಿವೆ. ಆದರೂ ಕೂಡ ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.

ಈ ಬಾರಿ ಮುಸ್ಲಿಮರು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಹಿಂದೂ ಸಮಾಜ ಇದನ್ನು ಗಮನಿಸಬೇಕು. ಜಾತಿಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ. ಇದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗನ್ನಿಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಕಾಂತೇಶ್, ಶಿವಾಜಿ, ರಾಜಣ್ಣ, ಬಾಲು, ಮೋಹನ್, ಚನ್ನಬಸಪ್ಪ ಮುಂತಾದವರು ಇದ್ದರು.

ಕೆ.ಎಸ್. ಈಶ್ವರಪ್ಪನವರ ಪತ್ರಿಕಾಗೋಷ್ಠಿಯಲ್ಲಿ ಪೆನ್‌ಡ್ರೈವ್ ಹಂಚಿದ್ದು ಪತ್ರಕರ್ತರ ಗಮನಸೆಳೆಯಿತು. ಇತ್ತೀಚಿಗೆ ಪೆನ್‌ಡ್ರೈವ್‌ಗಳದ್ದೇ ಕಥೆಯಾಗಿರುವಾಗ ಈಶ್ವರಪ್ಪನವರು ಯಾವ ಪೆನ್‌ಡ್ರೈವ್ ಕೊಟ್ಟರು ಎಂಬ ಕೂತೂಹಲ ಮೂಡಿದ್ದರಲ್ಲಿ ಆಶ್ಚರ್ಯವಿಲ್ಲ. ಇದರಲ್ಲಿ ಏನು ಇದೆ ಎಂದು ಅವರನ್ನೇ ಕೇಳಿದಾಗ ನೀವೇ ನೋಡಿ ಎಂದು ಮತ್ತಷ್ಟು ಕುತೂಹಲವನ್ನು ಈಶ್ವರಪ್ಪ ಮೂಡಿಸಿದರು. ವಾಸ್ತವವಾಗಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈಶ್ವರಪ್ಪ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ವಿಡಿಯೋವನ್ನು ರಾಘವೇಂದ್ರ ಹರಿಬಿಟ್ಟಿದ್ದರು. ಅದನ್ನೇ ನಾನು ಪೆನ್‌ಡ್ರೈವ್ ಮೂಲಕ ಸಾಕ್ಷಿಕೊಟ್ಟಿದ್ದೇನೆ. ನನ್ನ ವಿರುದ್ಧ ಷಡ್ಯಂತರ ಮಾಡಿರುವ ರಾಘವೇಂದ್ರ ಮತ್ತು ವಿಜಯೇಂದ್ರ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಾಸ್ತವವಾಗಿ ಪೆನ್‌ಡ್ರೈವ್‌ನಲ್ಲಿ ಈಶ್ವರಪ್ಪನವರು ಬಿಜೆಪಿಗೆ ಬೆಂಬಲ ನೀಡಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ಹಳೆಯ ಭಾಷಣದ ತುಣುಕಿತ್ತು.

Leave a Comment

error: Content is protected !!